Vishnuvardhan samadhi : ದಿವಂಗತ ಹಿರಿಯ ನಟ ಡಾ. ವಿಷ್ಣುವರ್ಧನ್ ಸಮಾಧಿ ನೆಲಸಮ ಹಿನ್ನೆಲೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ವಿಷ್ಣು ಸಮಾಧಿ ಇದ್ದ ಜಾಗ ಯಾರದ್ದು, ಅದರ ಹಿನ್ನೆಲೆ ಏನು..? ಎನ್ನುವ ವಿಚಾರ ನಿಮಗೆ ಗೊತ್ತೆ..? ಬನ್ನಿ ತಿಳಿಯೋಣ..
ಹೌದು.. ಅಭಿಮಾನ್ ಸ್ಟುಡಿಯೋ ಸ್ಥಳದಲ್ಲಿದ್ದ ಸಾಹಸಸಿಂಹ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಅದನ್ನು ಯಾರು ಧ್ವಂಸ ಮಾಡಿದರು ಎನ್ನುವ ಕುರಿತು ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅದಕ್ಕೂ ಮುನ್ನ ನೀವು ಅಭಿಮಾನ್ ಸ್ಟುಡಿಯೋ ಹಿನ್ನೆಲೆ ತಿಳಿಯಬೇಕು..
ಅಭಿಮಾನ್ ಸ್ಟುಡಿಯೋ ಹಿನ್ನೆಲೆ : ಕೆಂಗೇರಿ ಬಳಿಯ 10 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಅಭಿಮಾನ್ ಸ್ಟುಡಿಯೋ ಇದೆ. ಈ ಸ್ಟುಡಿಯೋ ಕನ್ನಡ ಚಿತ್ರರಂಗದ ಹಿರಿಯ ನಟ ಬಾಲಕೃಷ್ಣ ಅವರ ಒಡೆತನದಲ್ಲಿದೆ. ಹಾಗೆಂದು ಇದನ್ನು ಅವರು ಖರೀದಿ ಮಾಡಿಲ್ಲ, ಬದಲಿಗೆ ಸರ್ಕಾರವೇ ಅನುದಾನವಾಗಿ ನೀಡಿತ್ತು.
ಅಂದಿನ ಕಾಲದಲ್ಲಿ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದ ಹಿರಿಯ ನಟ ಬಾಲಕೃಷ್ಣ ಅವರಿಗೆ ಸರ್ಕಾರ 20 ಎಕರೆ ಜಾಗವನ್ನು ಅನುದಾನವಾಗಿ ನೀಡಿತ್ತು. ಆದರೆ, ಅವರು ಬದುಕಿದ್ದಾಗಲೇ 10 ಎಕರೆ ಜಾಗವನ್ನು ಮಾರಾಟ ಮಾಡಿ, ಉಳಿದ ಜಾಗದಲ್ಲಿ ಅಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಅವರ ಮಕ್ಕಳು ಸಹ ಮಾತುಕೊಟ್ಟಿದ್ದರು.
ವಿಷ್ಣು ಸಮಾಧಿ : ಪ್ರಸ್ತುತ ವಿಷ್ಣುವರ್ಧನ್ ಅವರ ಸಮಾಧಿಯನ್ನು ಬಾಲಣ್ಣನ ಕುಟುಂಬದವರು ಧ್ವಂಸ ಮಾಡಿದ್ದಾರೆ. ಅದಕ್ಕೆ ಕಾರಣ ಅಭಿಮಾನ್ ಸ್ಟುಡಿಯೋ ವಿವಾದಿತ ಜಾಗವಾಗಿದ್ದರಿಂದ, ವಿಷ್ಣು ನಿಧನ ಹೊಂದಿದ್ದಾಗಿನಿಂದಲೂ ಈ ಸ್ಥಳದ ಕುರಿತು ಬಾಲಣ್ಣ ಕುಟುಂಬದಲ್ಲೇ ಜಗಳವಿತ್ತು.
ಉಳಿದ 10 ಏಕರೆ ಸ್ಥಳದಲ್ಲಿ ತಮ್ಮದೂ ಪಾಲಿದೆ ಎಂದು ಬಾಲಣ್ಣ ಪುತ್ರಿ ಗೀತಾ ನ್ಯಾಯಾಲಯದ ಮೆಟ್ಟಿಲೇರಿದರು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿರುವಾಗಲೇ ವಿಷ್ಣುವರ್ಧನ್ ಅವರ ಅಂತಿಮ ಸಂಸ್ಕಾರವನ್ನು ಅಂದಿನ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ನೇರವೇರಿಸಿತ್ತು.
ಒಂದು ವೇಳೆ ಸ್ಟುಡಿಯೋ ಅಭಿವೃದ್ಧಿ ಮಾಡಿಲ್ಲವಾದರೆ ಸರ್ಕಾರಕ್ಕೆ ಆ ಜಾಗವನ್ನು ಮರಳಿ ಪಡೆಯುವ ಅಧಿಕಾರ ಇತ್ತು, ಆದರೆ, ಆಗಲೂ ಸಹ ನಿಗದಿತ ಅಧಿಕಾರಿಗಳು ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಿಲ್ಲ. ತದನಂತರ 2015 ಬಾಲಣ್ಣ ಅವರ ಮಕ್ಕಳು ಹೈಕೋರ್ಟ್ ಮೊರೆ ಹೋಗಿ ಸರ್ಕಾರದ ಜಪ್ತಿ ಆದೇಶಕ್ಕೆ ತಡೆ ತಂದರು.
ಅಚ್ಚರಿ ವಿಚಾರ ಅಂದ್ರೆ, ಪ್ರಸ್ತುತ ನೆಲಸಮವಾದ ವಿಷ್ಣುವರ್ಧನ್ ಸಮಾಧಿಯ ಸ್ಥಳದಲ್ಲೇ ಹಿರಿಯ ನಟ ಬಾಲಕೃಷ್ಣ ಅವರ ಸಮಾಧಿ ಇತ್ತು. ಅದನ್ನೂ ಸಹ ಧ್ವಂಸ ಮಾಡಲಾಗಿದೆ. ಒಟ್ಟಾರೆಯಾಗಿ ಪ್ರಸ್ತುತ ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
Share this content: