Mon. Aug 11th, 2025

Avatara Purusha 2 : ಸಿಂಪಲ್ ಸುನಿ ನಿರ್ದೇಶನದ, ಶರಣ್ ನಾಯಕರಾಗಿ ನಟಿಸಿರುವ ‘ಅವತಾರ ಪುರುಷ 2’ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದ್ದು ಕುತೂಹಲ ಮೂಡಿಸುತ್ತಿದೆ.

ಇತ್ತೀಚೆಗೆ ನಟ ನೆನಪಿರಲಿ ಪ್ರೇಮ್, ರಿಷಿ, ವಿಕ್ಕಿ ವರುಣ್, ಪ್ರವೀಣ್ ತೇಜ್ ಹಾಗೂ ನಿರ್ದೇಶಕ ಸಂತು ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ‘ಅವತಾರ ಪುರುಷ’ ಮೊದಲ ಭಾಗವನ್ನು ಚಿತ್ರಮಂದಿರ, ಓಟಿಟಿ ಹಾಗೂ ಖಾಸಗಿ ವಾಹಿನಿಯಲ್ಲಿ ಸಾಕಷ್ಟು ಜನರು ವೀಕ್ಷಿಸಿದ್ದಾರೆ. ಅದೇ ರೀತಿ ಈ ಚಿತ್ರದ ಎರಡನೇ ಭಾಗವನ್ನು ನೋಡಿ ಯಶಸ್ವಿಗೊಳಿಸಿ. ಮೊದಲ ಭಾಗವನ್ನು ನೋಡಿದವರಿಗೆ ಹಾಗೂ ನೋಡದವರಿಗೆ ಇಬ್ಬರಿಗೂ ಭಾಗ 2 ಅರ್ಥವಾಗುತ್ತದೆ.

ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಸಿಂಪಲ್ ಸುನಿ. ಕನ್ನಡ ಚಿತ್ರಗಳಲ್ಲಿ ಗುಣಮಟ್ಟ ಕಡಿಮೆ ಎಂದು ಕೆಲವರು ಹೇಳುತ್ತಾರೆ. ಆದರೆ ನಮ್ಮ ಚಿತ್ರದ ಟ್ರೇಲರ್ ನೋಡಿದರೆ, ಚಿತ್ರ ಹೇಗೆ ಬಂದಿರಬಹುದು ಎಂದು ಎಲ್ಲರಿಗೂ ತಿಳಿಯುತ್ತದೆ. ಯಾವುದೇ ಕೊರತೆಯಿಲ್ಲದೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದೇವೆ‌. ಏಪ್ರಿಲ್ 5 ಚಿತ್ರ ಬಿಡುಗಡೆಯಾಗಲಿದೆ.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಪಷ್ಕರ್ ಹಾಗೂ ನಿರ್ದೇಶಕ ಸುನಿ ಅವರ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಸುನಿ ಅವರು ಚಿತ್ರದ ಕಥೆ ಹೇಳುತ್ತೇನೆ ಎಂದಾಗ ಕಾಮಿಡಿ ಜಾನರ್ ನ ಕಥೆ ಅಂದುಕೊಂಡಿದ್ದೆ. ಆದರೆ ಅವರು ಇದೊಂದು ವಿಭಿನ್ನ ಕಥೆ. ಈ ಕಥೆಯಲ್ಲಿ ಕಾಮಿಡಿ ಕೂಡ ಇರುತ್ತದೆ ಎಂದರು. ನನಗೂ ಬೇರೆಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ. ಹಾಗಾಗಿ ಈ ಚಿತ್ರದ ಪಾತ್ರ ಇಷ್ಟವಾಯಿತು. ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಮೂಡಿಬಂದಿದೆ. ಎಲ್ಲರೂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎನ್ನುತ್ತಾರೆ ನಟ ಶರಣ್.

ನಾನು ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದಾಗ “ಅವತಾರ ಪುರುಷ 2” ಚಿತ್ರ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರು. ಜನರಿಗೆ ಈ ಚಿತ್ರದ ಬಗ್ಗೆ ಅಷ್ಟು ಕುತೂಹಲವಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎಂದು ನಟಿ ಆಶಿಕಾ ರಂಗನಾಥ್ ತಿಳಿಸಿದರು. ವಿತರಕ ಮೋಹನ್ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸಾಧುಕೋಕಿಲ, ಸುಧಾರಾಣಿ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share this content:

Leave a Reply

Your email address will not be published. Required fields are marked *